ಬೂದಿಕಪ್ಪು ಕ್ಷುದ್ರ ವರ್ಣ ಮೈಯ್ಯಿ ಮುಳ್ಳು ರಾಶಿಯು ।

ಗೋಡೆ – ಬಟ್ಟೆ – ತಂತಿ - ಕಟ್ಟೆ ಸಿಕ್ಕ ಕಡೆಗೆ ವಾಸವು ।

ಒಮ್ಮೆ ಮುಟ್ಟಲಾಗಿ ಕೆರೆತ ಬಾವು ತರುವ ಜೀವಿಯು|

ಮನುಜ ಸಹಜ ನೋಟದಲ್ಲಿ ನೋಡಲೊಂದು ಜಂತುವು।

ಅಬ್ಬಾ!! ಎಂಥ ಕೆಟ್ಟ ಸೃಷ್ಟಿಯೆಂದು ತೆಗಳಿ ಜರಿವರು ।

ಕಂಡರೊಮ್ಮೆ ನಮ್ಮ ಚಿಣ್ಣರೆಲ್ಲರೋಡಿಬಿಡುವರು|

ಅದೇ ಹುಳುವು ಕೊಂಚ ತಾಳಿ ಸ್ವಲ್ಪ ಸಮಯ ಜಾರಲು।

ಕೆಟ್ಟ ಬಣ್ಣ ಕಳಚಿ ಹೊಸತು ರೂಪತಾಳಿಬಿಡುವುದು।

ಆಹಾ!! ಎಂಥ ಚೆಂದವೆಂದು ಎಲ್ಲ ಮುದದಿ ನೋಡಲು।

ಹಿಂದೆ ಜರಿದ ಹುಳುವೆ ನಾನು ಈಗ ನೋಡಿ ಎನುವುದು।

ಪ್ರಕೃತಿ ದತ್ತ ಸೊಬಗು ತುಂಬಿ ಬಣ್ಣ ಚಿಟ್ಟೆ ನಗುವುದು ।

ಬೀಗಿ ತಾನು ಜನರನೆಲ್ಲ ತನ್ನ ಬಳಿಗೆ ಸೆಳೆವುದು ।

ಕಂಡ ಸೃಷ್ಟಿಯೆಲ್ಲ ಒಂದು ವಿಧಿಯ ಜಾಲ ಚಕ್ರವು।

ಎಲ್ಲ ಲೋಪ ಶ್ರಮಿಸಿ ದುಡಿಯೆ ಅಳಿದು ಸುಖವ ತರುವುದು॥